ಆದಿತ್ಯರಾವ್‌ ಶರಣಾದ – ಮಂಗಳೂರು ಬಾಂಬ್‌ ಮತ್ತು ಪೂರ್ವಾಗ್ರಹದ ಪೂರ್ವಾಪರ..! – ಪ್ರತಿಕ್ಷಣ ವಿಶ್ಲೇಷಣೆ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್‌ ಇಟ್ಟ ಪ್ರಕರಣದಲ್ಲಿ ಆದಿತ್ಯರಾವ್‌ ಎಂಬ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಲ್ಲ, ಬದಲಿಗೆ ಆತನೇ ಬಂದು ಶರಣಾಗಿದ್ದು. ಬಾಂಬ್‌ ಇಟ್ಟ ಬಳಿಕ ತನ್ನೂರು ಉಡುಪಿಗೆ ಹೋಗಿದ್ದ ಎನ್ನಲಾಗಿದ್ದ ೪೦ ವರ್ಷ ಸುಮಾರಿನ ಆ ವ್ಯಕ್ತಿ ಲಾರಿ ಹತ್ತಿಕೊಂಡು ಬೆಳಗ್ಗೆ ಬೆಂಗಳೂರಿಗೆ ಬಂದನಂತೆ. ಶರಣಾಗುವ ಉದ್ದೇಶದಿಂದಲೇ ರಾಜಧಾನಿಗೆ ಬಂದಿದ್ದ ಆತ ಸೀದಾ ಹೋಗಿದ್ದು ರಾಜ್ಯದ ಪೊಲೀಸ್‌ ಇಲಾಖೆಯ ಮುಖ್ಯಸ್ಥರ ಕಚೇರಿಗೆ, ಬೆಳಗ್ಗೆ ೮.೩೦ಕ್ಕೆ. ತನ್ನನ್ನು ತಾನು ಆದಿತ್ಯರಾವ್‌ ಎಂದು ಪರಿಚಯಿಸಿಕೊಂಡ ಬಳಿಕ ಮಂಗಳೂರು ಬಾಂಬ್‌ ಇಟ್ಟಿದ್ದು ತಾನೇ ಎಂದು ಒಪ್ಪಿಕೊಂಡ. ಆತನ ಬಂಧನದೊಂದಿಗೆ ಮಂಗಳೂರನ್ನು ಬೆಚ್ಚಿಬೀಳಿಸಿದ ಘಟನೆಗೆ ಸದ್ಯಕ್ಕೊಂದು ತಾರ್ಕಿಕ ಅಂತ್ಯ ಸಿಕ್ಕಿದೆ.

ಆದರೆ ಆದಿತ್ಯರಾವ್‌ ಬಂಧನದ ಬಳಿಕ ಶುರುವಾಗಿರುವ ಚರ್ಚೆ, ಟೀಕೆ-ಟಿಪ್ಪಣಿಗಳು, ವ್ಯಂಗ್ಯಗಳು ಒಂದೆರಡಲ್ಲ. ಅವುಗಳ ಮಹತ್ವವನ್ನು ಏಕಾಏಕಿ ತಳ್ಳಿಹಾಕಲು ಸಾಧ್ಯವೂ ಇಲ್ಲ. ಹಿಂಸೆಗೆ ಧರ್ಮವಿಲ್ಲ ನಿಜ, ಆದರೆ ಹಿಂಸಾಕೋರರನ್ನು ಸದಾ ಧರ್ಮದ ಕಣ್ಣಿನಲ್ಲೇ ನೋಡುವ, ನಿರ್ದಿಷ್ಟ ಸಮುದಾಯದ ಮೇಲೆ ಎಲ್ಲವನ್ನೂ ಆರೋಪಿಸುವ ಮನಸ್ಥಿತಿಗೆ ಮಂಗಳೂರು ಬಾಂಬ್‌ ಪ್ರಕರಣ ಉತ್ತಮ ದೃಷ್ಟಾಂತ ಎನ್ನುವುದರಲ್ಲಿ ಎರಡು ಮಾತಿಲ್ಲ.

ಮಂಗಳೂರು ಬಾಂಬ್‌ ಸುದ್ದಿ ಸ್ಫೋಟಗೊಂಡ ಕೆಲವೇ ಕ್ಷಣಗಳಲ್ಲಿ ಅದಕ್ಕೆ ಅಂಟಿಕೊಂಡಿದ್ದು ಕರಾವಳಿ ನಗರಿಯಲ್ಲಿ ಕೆಲ ದಿನಗಳ ಹಿಂದೆಯಷ್ಟೇ ನಡೆದಿದ್ದ ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆಯ ವೇಳೆ ನಡೆದಿದ್ದ ಹಿಂಸಾಚಾರ ಮತ್ತು ತರುವಾಯದ ಗೋಲಿಬಾರ್‌. ಬಾಂಬ್‌ ಇಟ್ಟಿದ್ದು ಯಾರು ಎಂಬುವ ಖಚಿತ ಸುಳಿವು ಸಿಗದೇ ಹೋದರೂ ಆ ವೇಳೆಗಾಗಿಯೇ ಆ ವ್ಯಕ್ತಿ ಶಂಕಿತ ಉಗ್ರ, ಭಯೋತ್ಪಾದಕನಾಗಿ ಬಿಟ್ಟಿದ್ದ.

ದೇಶದಲ್ಲಿ ಘಟಿಸಿದ್ದ ಬಾಂಬ್‌ ಸ್ಫೋಟ ಪ್ರಕರಣಗಳು ರಾಜಕೀಯ ಲಾಭದ ನಷ್ಟದ ಪ್ರಮುಖ ದಾಳ. ಮಂಗಳೂರಲ್ಲಿ ಬಾಂಬ್‌ ಸಿಕ್ಕ ಪ್ರಕರಣವೂ ಅಷ್ಟೇ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯಿಂದ ಮೊದಲುಗೊಂಡು ಆಡಳಿತರೂಢ ಬಿಜೆಪಿ ಮತ್ತು ಪ್ರಧಾನ ವಿಪಕ್ಷ ಆಗಿರುವ ಕಾಂಗ್ರೆಸ್‌ ಕೂಡಾ ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳುವುದರಲ್ಲಿ ಹಿಂದೆ ಬಿದ್ದಿಲ್ಲ. ಆದರೆ ನಾಯಕರು ಎಷ್ಟೊಂದು ಪೂರ್ವಾಗ್ರಹಪೀಡಿತರಾಗಿದ್ದಾರೆ ಅವರಾಡಿರುವ ಮಾತುಗಳೇ ಸಾಕ್ಷಿ.

ತನಿಖೆ ಪ್ರಾಥಮಿಕ ಹಂತದಲ್ಲಿ ಮುಗಿಯುವ ಮೊದಲೇ ಪೊಲೀಸ್‌ ಇಲಾಖೆಯ ಹೊಣೆಗಾರಿಕೆ ಹೊತ್ತಿರುವ ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ಆದಿತ್ಯರಾವ್‌ಗೆ ಮಾನಸಿಕ ಖಿನ್ನತೆಯ ಪ್ರಮಾಣಪತ್ರ ಕೊಟ್ಟಿದ್ದಾರೆ. ʻಅವರು ಎಲ್ಲೂ ಕೆಲಸ ಸಿಗದೇ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆʼ ಎಂದು ಹೇಳಿದ್ದಾರೆ. ಆದರೆ ಆರೋಪಿ ಆದಿತ್ಯರಾವ್‌ ಮನೋರೋಗಿಯೇ ಇಲ್ಲವೇ ಎನ್ನುವುದನ್ನು ದೃಢೀಕರಿಸಬೇಕಾಗಿರುವ ವೈದ್ಯಕೀಯ ಪರೀಕ್ಷೆ ಇನ್ನೂ ನಡೆದಿಲ್ಲ. ಆರೋಪಿಯ ಬಂಧನದ ಬಳಿಕ ನಡೆದಿದ್ದು ಸಹಜ ವೈದ್ಯಕೀಯ ಪರೀಕ್ಷೆಯಷ್ಟೇ.

ಇನ್ನು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ಆಡಿರುವ ಮಾತು. ಮಂಗಳೂರು ಗಲಭೆಯಲ್ಲಿ ಯಾರು ಪಾಲ್ಗೊಂಡಿದ್ದಾರೋ ಅವರ ಪ್ರೇರಣೆಯಿಂದಲೇ ಮಂಗಳೂರು ಬಾಂಬ್‌ ಘಟನೆ ನಡೆದಿದೆ. ಅವರನ್ನು ತಕ್ಷಣವೇ ಬಂಧಿಸಿ ಜೈಲಿಗೆ ಕಳುಹಿಸಬೇಕು ಎಂದಿದ್ದರು. ಅಷ್ಟೇ ಅಲ್ಲ, ಸಹಜವಾಗಿಯೇ ಕುಮಾರಸ್ವಾಮಿಯನ್ನು ಟೀಕಿಸುವ ಸಲುವಾಗಿ ಪಾಕಿಸ್ತಾನವನ್ನೂ ಎಳೆದು ತಂದಿದ್ದರು.

ಮಂಗಳೂರು ಬಾಂಬ್‌ ಬಗ್ಗೆ ಕುಮಾರಸ್ವಾಮಿ ನೀಡಿದ ಹೇಳಿಕೆ ದೇಶದ್ರೋಹಿ ಹೇಳಿಕೆ. ಅವರು ತಕ್ಷಣವೇ ಕ್ಷಮೆಯಾಚಿಸಬೇಕು. ಇಲ್ಲವಾದರೆ ಅವರು ಪಾಕಿಸ್ತಾನ ಪರ ಎಂದು ಅರ್ಥ. ಪಾಕಿಸ್ತಾನವನ್ನು ಜಾಗತಿಕ ಮಟ್ಟದಲ್ಲಿ ಏಕಾಂಗಿ ಮಾಡಲು ನಾವು ಪ್ರಯತ್ನಪಡುತ್ತಿದ್ದರೆ ವಿರೋಧ ಪಕ್ಷಗಳು ಪಾಕಿಸ್ತಾನ ಪರ ನಿಂತಿವೆ ಎಂದು ಹೇಳುವ ಮೂಲಕ ಬಿಜೆಪಿ ಇತ್ತೀಚೆಗೆ ಅವಿಷ್ಕರಿಸಿದ ಹೊಸ ತಂತ್ರಗಾರಿಕೆಯನ್ನು ಇಲ್ಲಿಯೂ ಅಳವಡಿಸಿದರು. ಈಗ ಬಂಧಿತನಾಗಿರುವುದು ಆದಿತ್ಯರಾವ್‌. ಮೇಲ್ನೋಟಕ್ಕೆ ಆತನಿಗೂ ಮಂಗಳೂರು ಗಲಭೆಗೂ ಸಂಬಂಧವೇ ಇಲ್ಲ. ಹಾಗಾದರೆ ಜೋಶಿಯವರ ದಿವ್ಯಜ್ಞಾನಕ್ಕೆ ಗಲಭೆಯೊಂದಿಗಿನ ನಂಟು ನಿಲುಕಿದ್ದು ಹೇಗೆ ಎನ್ನುವುದು ಸೋಜಿಗ ಎನ್ನುವ ತುರ್ತೇನೂ ಇಲ್ಲ.

ಮೊದಲ ದಿನ ೧೦ ಕೆಜಿ ತೂಕದ ಬಾಂಬ್‌, ೫೦೦ ಮೀಟರ್‌ ಸಿಡಿಯುವ ಬಾಂಬ್‌ ಎಂದೆಲ್ಲ ಹಬ್ಬಿದ್ದು ನಿನ್ನೆಯಷ್ಟೊತ್ತಿಗೆ ಕಚ್ಚಾ ಬಾಂಬ್‌ ಆಗಿ ಬದಲಾಯಿತು. ಸಿಕ್ಕ ಸ್ಫೋಟಕದ ಸ್ವರೂಪದ ಬಗ್ಗೆ ಮಂಗಳೂರು ಪೊಲೀಸರು ಮೊದಲ ದಿನ ಸ್ಪಷ್ಟವಾದ ಮಾತುಗಳನ್ನು ಹೇಳದೇ ಇದ್ದರೂ ನಿನ್ನೆ ಮಧ್ಯಾಹ್ನದ ವೇಳೆಗೆ ಪೊಲೀಸ್‌ ಆಯುಕ್ತ ಹರ್ಷ ಸಿಕ್ಕಿದ್ದು ಕಚ್ಚಾ ಬಾಂಬ್‌ ಎಂಬ ಮೊದಲ ಬಹಿರಂಗ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದರೊಂದಿಗೆ ಐಈಡಿ – ಸುಧಾರಿತ ಸ್ಫೋಟಕ ಸಾಧನ (ಸಹಜವಾಗಿ ಬಾಂಬ್‌ ಎಂದು ಕರೆಯುತ್ತೇವೆ) ಅಥವಾ ಆರ್‌ಡಿಎಕ್ಸ್‌ (ಪುಲ್ವಾಮಾದಲ್ಲಿ ಸೈನಿಕರ ಹತ್ಯೆಗೆ ಉಗ್ರರು ಬಳಸಿದ್ದು ಆರ್‌ಡಿಎಕ್ಸ್‌ನ್ನೇ) ಎಂದು ಟೀವಿಗಳಲ್ಲಿ ಬರುತ್ತಿದ್ದ ವೀಕ್ಷಕ ವಿವರಣೆ ಪೌಡರ್‌ ಬಾಂಬ್‌ನ ಗಾತ್ರ, ಭಾರ ಮತ್ತು ಪರಿಣಾಮ ಕುಬ್ಜವಾಗಿ ಬಿಡ್ತು.

ಬಾಂಬ್‌ ಇಟ್ಟಿದ್ದು ಯಾರು ಎಂಬ ಪ್ರಶ್ನೆಯ ಜೊತೆಗೆ ಇದು ನಿಜಕ್ಕೂ ಅಪರಾಧ ಕೃತ್ಯವೇ ಅಥವಾ ಪೊಲೀಸರ ಪ್ರಹಸನವೇ ಎಂಬ ಪ್ರಶ್ನೆಗಳನ್ನು ಎತ್ತಿದ್ದು ಮಾಜಿ ಸಿಎಂ ಕುಮಾರಸ್ವಾಮಿ. ಇವತ್ತು ಆದಿತ್ಯರಾವ್‌ ಶರಣಾಗತಿಯನ್ನೂ ನಾಟಕ ಎಂದು ಬಣ್ಣಿಸಿ ಇದೊಂದು ಪ್ರಹಸನ. ನಿರ್ದಿಷ್ಟ ಸಮುದಾಯವನ್ನು ಟಾರ್ಗೆಟ್‌ ಮಾಡಬೇಡಿ ಎಂದಿದ್ದಾರೆ. ಬಾಂಬ್‌ ಬಗ್ಗೆ ಕುಮಾರಸ್ವಾಮಿ ಆಡಿರುವ ಮಾತು ಬಾಲಿಶತನದ್ದು. ಇಟ್ಟಿದ್ದು ಕಚ್ಚಾ ಬಾಂಬ್‌ ಮತ್ತು ಇದು ನಾಟಕ ಅಲ್ಲ ಎನ್ನುವುದು ಆದಿತ್ಯರಾವ್‌ ಬಂಧನದೊಂದಿಗೆ ದೃಢವಾಗಿದೆ. ಆದರೆ ನಿನ್ನೆಯ ಘಟನೆಯ ವಿಷ್ಯದಲ್ಲಿ ಕುಮಾರಸ್ವಾಮಿಯನ್ನು ಟೀಕಿಸುವ ಭರದಲ್ಲಿ ಜೋಶಿ ಪಾಕಿಸ್ತಾನವನ್ನು ಎಳೆದು ತರುವ ಅಗತ್ಯವೂ ಇಲ್ಲ, ಅನಿವಾರ್ಯವೂ ಅಲ್ಲ.

ಮಂಗಳೂರಲ್ಲಿ ಮಾತಾಡಿದ ಮಾಜಿ ಸಚಿವ ಯು ಟಿ ಖಾದರ್‌ ಬಾಂಬ್‌ ಇಡುವಾಗ ತಲೆ ಸರಿ ಇತ್ತು, ಬಾಂಬ್‌ ಇಟ್ಟ ಬಳಿಕ ತಲೆ ಸರಿ ಇರಲಿಲ್ವಾ..? ಮಂಗಳೂರು ಬಾಂಬ್‌ ಕೇಸಲ್ಲಿ ಮುಸ್ಲಿಂ ಧರ್ಮವನ್ನು ಉಲ್ಲೇಸಿದ ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ಮತ್ತು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಇದರ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿರುವ ಟೀಕೆಗಳನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ. ಒಂದು ವೇಳೆ ಮುಸ್ಲಿಂ ಸಮುದಾಯದ ವ್ಯಕ್ತಿಯ ಈ ಕೇಸ್‌ನಲ್ಲಿ ಸಿಕ್ಕಿಬಿದ್ದಿದ್ದರೆ ಮಾಧ್ಯಮಗಳನ್ನು ಹೇಗೆ ಬಿಂಬಿಸ್ತಿದ್ವು..? ಹೇಗೆ ವರದಿ ಮಾಡ್ತಿದ್ವು..? ಎಂಬ ಪ್ರಶ್ನೆಗಳನ್ನು ಎತ್ತಿದ್ದಾರೆ. ಆದಿತ್ಯರಾವ್‌ ಎಂಬಾತ ಬಂಧಿತನಾದ ಕಾರಣಕ್ಕಾಗಿಯೇ ಆತ ಸೈಕೋ ಬಾಂಬರ್‌ ಆಗ್ಬಿಟ್ನಾ..? ಕೆಲಸ ಸಿಕ್ಕಿಲ್ಲ ಎಂದು ಬಾಂಬ್‌ ಇಟ್ನಾ..? ಆತ ಹವ್ಯಾಸಿ ಹುಸಿ ಬಾಂಬ್‌ ಕಿಡಿಗೇಡಿ, ಮಂಗಳೂರಲ್ಲಿ ಸಿಕ್ಕಿದ್ದು ಕಚ್ಚಾ ಬಾಂಬ್‌ ಎಂದೆಲ್ಲ ತೋರಿಸಲಾಗುತ್ತಿದೆ ಎಂದು ಕಟು ಮಾತುಗಳನ್ನೂ ಆಡುತ್ತಿದ್ದಾರೆ. ಮಾಲೆಂಗಾವ್‌ ಸ್ಫೋಟ ಪ್ರಕರಣದಲ್ಲಿ ಬಿಜೆಪಿಯಿಂದ ಟಿಕೆಟ್‌ ಪಡೆದು ಗೆದ್ದು ಬಂದ ಸಂಸದೆ ಪ್ರಗ್ನ್ಯಾ ಸಿಂಗ್‌ ಥಾಕೂರ್‌ಗೆ ಸಿಕ್ಕಂತ ಮರ್ಯಾದೆ ಆದಿತ್ಯರಾವ್‌ಗೂ ಸಿಗುತ್ತಾ ಎಂದು ಪ್ರಶ್ನಿಸುತ್ತಿದ್ದಾರೆ.

ಮಂಗಳೂರು ಕೇಸಲ್ಲಿ ಸಿಕ್ಕಿಬಿದ್ದಿರುವ ಆದಿತ್ಯರಾವ್‌ ಪೂರ್ವಾಪರ ಮತ್ತು ಆತನ ಹಿಂದಿನ ಕೃತ್ಯಗಳನ್ನು ಗಮನಿಸುತ್ತಾ ಹೋದರೆ ಆತ ಒಬ್ಬ ಸೀರಿಯಲ್‌ ಅಫೆಂಡರ್‌ ಅಂದರೆ ಪದೇ-ಪದೇ ಕೃತ್ಯಗಳನ್ನು ಎಸೆಯುವ ವ್ಯಕ್ತಿ ಎನ್ನುವುದು ಸ್ಪಷ್ಟವಾಗುತ್ತದೆ. ಆದರೆ ಈ ಪ್ರಕರಣಕ್ಕೂ ಮಾಧ್ಯಮಗಳು ಇಂಥದ್ದೇ ಪ್ರಕರಣಗಳಲ್ಲಿ ವರ್ತಿಸಿದ ರೀತಿಗೂ ಇರುವ ವ್ಯತ್ಯಾಸ ಏನೆಂಬುದು ಸ್ಪಷ್ಟಗೋಚರ. ಅದರಲ್ಲೂ ಆಡಳಿತದಲ್ಲಿರುವ ಸಚಿವರೇ ಆರೋಪಿ ಬಂಧಿತನಾಗುವ ಮೊದಲು ಮತ್ತು ತರುವಾಯ ನೀಡಿದ ಹೇಳಿಕೆಗಳು ನಮ್ಮ ಮನಸ್ಥಿತಿಗಳು ಎಷ್ಟೊಂದು ಪೂರ್ವಾಗ್ರಹಪೀಡಿತ ಎನ್ನುವುದಕ್ಕೆ ಸಾಕ್ಷಿಯಷ್ಟೇ.

LEAVE A REPLY

Please enter your comment!
Please enter your name here