ತೆಲುಗು ಸಿನಿ ಲೋಕದ ಪವರ್ ಸ್ಟಾರ್ ಪವನ್ ಕಲ್ಯಾಣ್ ಈಗ ಬಿಜೆಪಿ ಜೊತೆ ಮೈತ್ರಿ ಘೋಷಿಸಿಕೊಂಡಿದ್ದಾರೆ. ಪವನ್ ನೇತೃತ್ವದ ಜನಸೇನಾ ಪಕ್ಷ ಆಂಧ್ರಪ್ರದೇಶದಲ್ಲಿ ಕೇಸರಿ ಪಾಳಯದೊಂದಿಗೆ ಹೊಂದಾಣಿಕೆ ಮಾಡಿಕೊಂಡಿದೆ. ಈ ಮೂಲಕ ರಾಜ್ಯದಲ್ಲಿ ತೃತೀಯ ರಂಗ ಸ್ಥಾಪನೆ ಘೋಷಣೆ ಮಾಡಿದ್ದಾರೆ.
ವಿಜಯವಾಡದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಪವನ್ ಕಲ್ಯಾಣ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಕನ್ನ ಲಕ್ಷ್ಮೀ ನಾರಾಯಣ ಜಾತಿವಾದಿ, ವಂಶವಾದಿ, ಭ್ರಷ್ಟ ಸರ್ಕಾರವನ್ನು ಕಿತ್ತೊಗೆದು 2024ರ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವ ಶಪಥ ಮಾಡಿದ್ದಾರೆ. ಎರಡೂ ಪಕ್ಷಗಳ ನಡುವೆ ಸಮನ್ವಯಕ್ಕಾಗಿ ಸಮನ್ವಯ ಸಮಿತಿಯೂ ರಚನೆ ಆಗಲಿದೆ.
ನರೇಂದ್ರ ಮೋದಿ ಪ್ರಧಾನಿ ಅಭ್ಯರ್ಥಿ ಆಗಿದ್ದಾಗಲೂ ನಾನು ಬೆಂಬಲಿಸಿದ್ದೆ. ಅವರನ್ನು ಗುಜರಾತ್ ರಾಜಧಾನಿ ಗಾಂಧಿನಗರದಲ್ಲಿ ಭೇಟಿ ಆಗಿ ನನ್ನ ಯೋಚನೆಗಳನ್ನು ಹಂಚಿಕೊಂಡಿದೆ. ಆಂಧ್ರಪ್ರದೇಶಕ್ಕೆ ಬಿಜೆಪಿಯ ಅಗತ್ಯವಿದೆ. ಆಂಧ್ರ ಹೊಸ ರಾಜ್ಯ ಆದ ಬಳಿಕ ಭ್ರಷ್ಟಾಚಾರವಿಲ್ಲದ, ಚಿಂತನೆಗಳಿರುವ ನಾಯಕರು ದೆಹಲಿಯಲ್ಲಿದ್ದು ಅದು ರಾಜ್ಯದ ಅಭಿವೃದ್ಧಿಗೆ ಪೂರಕವಾಗಿದೆ
ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.
ದೇಶ ಮತ್ತು ರಾಜ್ಯದ ಒಳಿತಿಗಾಗಿ ಪ್ರಧಾನಿ ಮೋದಿ ನಾಯಕತ್ವದಡಿ ಕೆಲಸ ಮಾಡಲು ಪವನ್ ಕಲ್ಯಾಣ್ ಉತ್ಸುಕರಾಗಿದ್ದಾರೆ. ಬಿಜೆಪಿ ಅವರನ್ನು ಸ್ವಾಗತಿಸುತ್ತದೆ
ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಹೇಳಿದ್ದಾರೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಯಿಂದ ಹಿಡಿದು 2024ರ ಮಹಾ ಚುನಾವಣೆವರೆಗೂ ರಾಜ್ಯದ ಒಳಿತಿಗಾಗಿ ಮೈತ್ರಿ ಮಾಡಿಕೊಂಡಿದ್ದೇವೆ. ರಾಜ್ಯದ ಹಿತ ಕಾಯುವುದೇ ನಮ್ಮ ಉದ್ದೇಶ ಎಂದು ಇಬ್ಬರೂ ಹೇಳಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ ಪಿ ನಡ್ಡಾ ಜೊತೆಗೆ ಪವನ್ ಕಲ್ಯಾಣ್ ಮಾತುಕತೆ ನಡೆಸಿದ್ದರು.
2019ರಲ್ಲಿ ನಡೆದಿದ್ದ ಆಂಧ್ರ ವಿಧಾನಸಭಾ ಚುನಾವಣೆಯಲ್ಲಿ 132 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಜನಸೇನಾ ಕೇವಲ 1 ಸೀಟನ್ನಷ್ಟೇ ಗೆದ್ದಿತ್ತು. ಶೇಕಡಾ 7ರಷ್ಟು ಮತಗಳನ್ನು ಗಳಿಸಿತ್ತು. ಈ ಚುನಾವಣೆಯಲ್ಲಿ ಎಡಪಕ್ಷಗಳು ಮತ್ತು ಬಹುಜನಸಮಾಜ ಪಕ್ಷದೊಂದಿಗೆ ಪವನ್ ಕಲ್ಯಾಣ್ ಪಕ್ಷ ಮೈತ್ರಿ ಮಾಡಿಕೊಂಡಿತ್ತು.