ಅನ್ನ, ನೀರು ಇಲ್ಲದೇ ವಿಶೇಷ ರೈಲಿನಲ್ಲಿ ಹೊರಟ 9 ಮಂದಿ ವಲಸೆ ಕಾರ್ಮಿಕರು ಸಾವು..! – ಯಾರು ಹೊಣೆ..?

ದಿಢೀರ್‌ ಘೋಷಣೆ ಆಗಿದ್ದ ಲಾಕ್‌ಡೌನ್‌ನಿಂದ ಬಸ್‌, ರೈಲುಗಳು ಸಿಗದೇ ಕಾಲ್ನಡಿಗೆಯಲ್ಲಿ ತಮ್ಮ ತಮ್ಮ ರಾಜ್ಯಗಳಿಗೆ ಹೊರಟ್ಟಿದ್ದ ವಲಸೆ ಕಾರ್ಮಿಕರಿಗೆ ತಡವಾಗಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ವಿಶೇಷ ಶ್ರಮಿಕ ರೈಲುಗಳನ್ನು ಓಡಿಸಲು ಆರಂಭಿಸಿತ್ತು. ಆದರೆ ಶ್ರಮಿಕ್‌ ರೈಲುಗಳಲ್ಲಿ ತವರು ರಾಜ್ಯಗಳಿಗೆ ಹೊರಟ್ಟಿದ 9 ಮಂದಿ ಕಾರ್ಮಿಕರು ಊಟ-ತಿಂಡಿ, ನೀರು ಇಲ್ಲದೇ ನಿತ್ರಾಣಗೊಂಡು ಉಷ್ಣಗಾಳಿಯ ಹೊಡೆತಕ್ಕೆ ಪ್ರಾಣ ಕಳೆದುಕೊಂಡಿದ್ದಾರೆ.

ಶ್ರಮಿಕ್‌ ರೈಲುಗಳಲ್ಲಿ ಪ್ರಯಾಣಿಸಿದ್ದ 9 ಮಂದಿ ವಲಸೆ ಕಾರ್ಮಿಕರು ಮೃತಪಟ್ಟಿದ್ದರ ಬಗ್ಗೆ ಸ್ವತಃ ರೈಲ್ವೆ ಇಲಾಖೆಯೇ ಹೇಳಿಕೆ ನೀಡಿದೆ.

ಮೃತಪಟ್ಟವರಲ್ಲಿ ಉತ್ತರಪ್ರದೇಶದಲ್ಲಿರುವ ತಮ್ಮ ತವರೂರಿಗೆ ವಾಪಸ್ಸಾಗ್ತಿದ್ದ ಐವರು ಮತ್ತು ಬಿಹಾರದಲ್ಲಿರುವ ತಮ್ಮ ತವರೂರುಗಳಿಗೆ ವಾಪಸ್‌ ಆಗ್ತಿದ್ದ ನಾಲ್ವರು ಸೇರಿದ್ದಾರೆ.

ಬಿಹಾರದ ಮುಜಾಫರ್‌ಪುರ್‌ನ ರೈಲ್ವೆ ನಿಲ್ದಾಣದಲ್ಲಿ ಅನ್ನಾಹಾರವಿಲ್ಲದೇ, ನೀರಿಲ್ಲದೇ ವಲಸೆ ಕಾರ್ಮಿಕ ಮಹಿಳೆಯೊಬ್ಬರು ಉಷ್ಣಗಾಳಿಯ ಹೊಡೆತಕ್ಕೆ ನಿಲ್ದಾಣದಲ್ಲೇ ಪ್ರಾಣ ಬಿಟ್ಟಿದ್ದಾರೆ. ತನ್ನ ತಾಯಿ ಪ್ರಾಣ ಕಳೆದುಕೊಂಡಿದ್ದಾಳೆ ಎಂಬುದನ್ನೂ ಅರಿಯದ ಮಗು ಆಕೆಯೊಂದಿಗೆ ಆಟವಾಡುತ್ತಿದ್ದ ದೃಶ್ಯ ಎಲ್ಲೆಡೆಯೂ ವೈರಲ್‌ ಆಗಿತ್ತು.

ಇನ್ನು ಇದೇ ಮುಜಾಫರ್‌ಪುರ್‌ನಲ್ಲಿ ವಲಸೆ ಕಾರ್ಮಿಕ ದಂಪತಿಯ 4 ವರ್ಷದ ಮಗು ಕೂಡಾ ಪ್ರಾಣ ಕಳೆದುಕೊಂಡಿದೆ.

ಉತ್ತರಪ್ರದೇಶದ ವಾರಾಣಸಿಗೆ ವಾಪಸ್ಸಾಗಿದ್ದ ಮುಂಬೈನಿಂದ ಬಂದಿದ್ದ ವಿಶೇಷ ರೈಲಿನಲ್ಲಿ ಇಬ್ಬರು ವಲಸೆ ಕಾರ್ಮಿಕರು ಶವವಾಗಿ ಪತ್ತೆ ಆಗಿದ್ದಾರೆ. ಇನ್ನು ಕಾನ್ಪುರಕ್ಕೆ ಬಂದಿದ್ದ ವಿಶೇಷ ರೈಲಿನೊಳಗೆಯೇ ಇಬ್ಬರು ಕಾರ್ಮಿಕರು ಜೀವ ಬಿಟ್ಟಿದ್ದಾರೆ.

ಅದರೆ ಮೃತಪಟ್ಟ 9 ಮಂದಿಯಲ್ಲಿ ಬಹುತೇಕರಿಗೆ ಬೇರೆ ಕಾಯಿಲೆಗಳು ಇದ್ದವು ಎಂದು ರೈಲ್ವೆ ಇಲಾಖೆ ಹೇಳಿದೆ.

LEAVE A REPLY

Please enter your comment!
Please enter your name here