ಅನರ್ಹಗೊಳಿಸುವ ಅಧಿಕಾರ ಸ್ಪೀಕರ್‌ ಕೈಯಲ್ಲಿ ಇರಬೇಕೇ, ಬೇಡ್ವೆ..? – ಸುಪ್ರೀಂಕೋರ್ಟ್‌ ಹೇಳಿದ್ದೇನು..?

ಶಾಸಕರು ಮತ್ತು ಸಂಸದರನ್ನು ಅನರ್ಹಗೊಳಿಸುವ ಸ್ಪೀಕರ್‌ ಅಧಿಕಾರದ ಬಗ್ಗೆ ಸಂಸತ್ತು ಮರು ಯೋಚನೆ ಮಾಡಬೇಕಿದೆ ಸುಪ್ರೀಂಕೋರ್ಟ್‌ನ ತ್ರಿಸದಸ್ಯ ನ್ಯಾಯಪೀಠ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಅಷ್ಟೇ ಅಲ್ಲದೇ ಒಂದು ವೇಳೆ ಅನರ್ಹತೆ ಸಂಬಂಧ ನಿರ್ಧಾರ ತೆಗೆದುಕೊಳ್ಳಲು ಸ್ಪೀಕರ್‌ ವಿಳಂಬ ಮಾಡಿದರೆ ಆಗ ಹೈಕೋರ್ಟ್‌ ಮಧ್ಯಪ್ರವೇಶ ಮಾಡಬಹುದು ಎಂದೂ ಹೇಳಿದೆ.

ಸ್ಪೀಕರ್‌ ನಿರ್ದಿಷ್ಟ ಪಕ್ಷದ ಸದಸ್ಯರಾಗಿರುತ್ತಾರೆ. ಹೀಗಾಗಿ ಸಂವಿಧಾನದ ಹತ್ತನೇ ಶೆಡ್ಯೂಲ್‌ ಪ್ರಕಾರ ಅನರ್ಹತೆಯ ನಿಷ್ಪಕ್ಷಪಾತ ಮತ್ತು ಶೀಘ್ರ ಇತ್ಯರ್ಥಕ್ಕೆ ಲೋಕಸಭಾ ಮತ್ತು ವಿಧಾನಸಭೆಯ ಸ್ಪೀಕರ್‌ ಬದಲಿಗೆ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅಥವಾ ಹೈಕೋರ್ಟ್‌ನ ಮುಖ್ಯ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ನ್ಯಾಯಮಂಡಳಿ ಅಥವಾ ಬಾಹ್ಯ ವ್ಯವಸ್ಥೆಯನ್ನು ಸಂಸತ್ತು ಸೃಷ್ಟಿಸಬಹುದು. ಇದರಿಂದ ಹತ್ತನೇ ಶೆಡ್ಯೂಲ್‌ನಲ್ಲಿ ಉಲ್ಲೇಖವಾಗಿರುವ ನಿಯಮಗಳಿಗೆ ನಿಜವಾದ ಶಕ್ತಿ ಬರುತ್ತದೆ. ನಮ್ಮ ಪ್ರಜಾಪ್ರಭುತ್ವದ ಸೂಕ್ತ ಕಾರ್ಯನಿರ್ವಹಣೆಗೆ ಅದು ಅನಿವಾರ್ಯ

ಎಂದು ನ್ಯಾಯಮೂರ್ತಿ ರೋಹಿಂಟನ್‌ ನಾರಿಮನ್‌, ಅನಿರುದ್ಧ ಬೋಸ್‌ ಮತ್ತು ವಿ ರಾಮಸುಬ್ರಹ್ಮಣಿಯನ್‌ ಅವರಿದ್ದ ಪೀಠ ತನ್ನ ಆದೇಶದಲ್ಲಿ ಹೇಳಿದೆ.

೨೦೧೭ರಲ್ಲಿ ಮಣಿಪುರ ವಿಧಾನಸಭೆಗೆ ನಡೆದಿದ್ದ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ನಿಂದ ಗೆದ್ದಿದ್ದ ಟಿ ಎಸ್‌ ಸಿಂಗ್‌ ಬಳಿಕ ಬಿಜೆಪಿಗೆ ಪಕ್ಷಾಂತರಗೊಂಡು ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದಾರೆ. ಹೀಗಾಗಿ ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಳಿಸುವಂತೆ ೧೩ ಅರ್ಜಿಗಳನ್ನು ಸ್ಪೀಕರ್‌ಗೆ ಸಲ್ಲಿಸಲಾಯಿತು. ಆದ್ರೆ ಸ್ಪೀಕರ್‌ ಯಾವುದೇ ನಿರ್ಧಾರ ಕೈಗೊಂಡಿರಲಿಲ್ಲ.

ಈ ಹಿನ್ನೆಲೆಯಲ್ಲಿ ಅನರ್ಹತೆ ಬಗ್ಗೆ ನಿರ್ಧಾರ ಕೈಗೊಳ್ಳಲು ಸ್ಪೀಕರ್‌ಗೆ ಆದೇಶ ನೀಡುವಂತೆ ಕೋರಿ ಮಣಿಪುರ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಸ್ಪೀಕರ್‌ ಅರೆ ನ್ಯಾಯಿಕ ಅಧಿಕಾರ ಹೊಂದಿರುವುದರಿಂದ ನಿರ್ದಿಷ್ಟ ಅವಧಿಯಲ್ಲಿ ಅಂದರೆ ಐದು ವರ್ಷದೊಳಗೆ ಅಥವಾ ವಿಧಾನಸಭೆಯ ಅವಧಿ ಮುಗಿಯುವುದರೊಳಗೆ ನಿರ್ಧಾರ ಕೈಗೊಳ್ಳಬಬಹುದು ಎಂದು ಹೇಳಿತ್ತು.

ಹೀಗಾಗಿ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ನಾಲ್ಕು ವಾರದೊಳಗೆ ಸ್ಪೀಕರ್‌ ತಮ್ಮ ನಿರ್ಧಾರ ಕೈಗೊಳ್ಳಬೇಕು. ಒಂದು ವೇಳೆ ನಿರ್ಧಾರ ಕೈಗೊಳ್ಳದೇ ಹೋದರೆ ಆಗ ಮತ್ತೆ ನಮಗೆ ಮನವಿ ಸಲ್ಲಿಸಬಹುದು ಎಂದು ಸುಪ್ರೀಂಕೋರ್ಟ್‌ ಆದೇಶ ನೀಡಿದೆ.

LEAVE A REPLY

Please enter your comment!
Please enter your name here