ಅಧಿಕ ಸಂಖ್ಯೆಯಲ್ಲಿ ಚೀನಿ ಸೈನಿಕರು ಬಂದಿದ್ದಾರೆ – ಅತಿಕ್ರಮ ಪ್ರವೇಶ ಬಗ್ಗೆ ರಕ್ಷಣಾ ಸಚಿವ ರಾಜ್‌ನಾಥ್‌ ಸಿಂಗ್‌ ಹೇಳಿಕೆ

ಗಮನಾರ್ಹ ಸಂಖ್ಯೆಯಲ್ಲಿ ಚೀನಾದ ಸೈನಿಕರು ನೈಜ ನಿಯಂತ್ರಣ ರೇಖೆಯಲ್ಲಿ ಭಾರತದ ಭೂ ಪ್ರದೇಶದೊಳಗೆ ಪ್ರವೇಶಿಸಿದ್ದಾರೆ ಎನ್ನುವುದನ್ನು ರಕ್ಷಣಾ ಸಚಿವ ರಾಜ್‌ನಾಥ್‌ ಸಿಂಗ್‌ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.

ಈ ಮೂಲಕ ಗಡಿಯಲ್ಲಿ ಚೀನಿಯರ ಅತಿಕ್ರಮ ಪ್ರವೇಶ ಅಗಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮೊದಲ ಬಾರಿಗೆ ಅಧಿಕೃತವಾಗಿ ಖಾತ್ರಿಪಡಿಸಿದಂತಾಗಿದೆ.

ʻಎರಡೂ ರಾಷ್ಟ್ರಗಳ ನಡುವೆ (ನೈಜ ನಿಯಂತ್ರಣ ರೇಖೆಗೆ) ಸಂಬಂಧ ಪಟ್ಟಂತೆ ಭಿನ್ನಾಭಿಪ್ರಾಯವಿದೆ. ಚೀನದ ಸೈನಿಕರು ಗಮನಾರ್ಹ ಸಂಖ್ಯೆಯಲ್ಲಿ ಅಲ್ಲಿಗೆ ಬಂದಿದ್ದಾರೆ (ನೈಜ ನಿಯಂತ್ರಣ ರೇಖೆಯಲ್ಲಿ ಭಾರತದ ಭೂಪ್ರದೇಶದೊಳಗೆ). ಭಾರತ ಏನು ಮಾಡಬೇಕಿತ್ತೋ ಅದನ್ನು ಮಾಡಿದೆʼ ಎಂದು ಸುದ್ದಿವಾಹಿನಿ ಸಿಎನ್‌ಎನ್‌ ನ್ಯೂಸ್‌ ೧೮ಗೆ ನೀಡಿದ ಸಂದರ್ಶನದಲ್ಲಿ ರಕ್ಷಣಾ ಸಚಿವ ರಾಜ್‌ನಾಥ್‌ ಸಿಂಗ್‌ ಹೇಳಿದ್ದಾರೆ.

ಜೂನ್‌ ೬ರಂದು ಮಿಲಿಟರಿಯ ಹಿರಿಯ ಅಧಿಕಾರಿಗಳ ನಡುವೆ ಮಹತ್ವದ ಸಭೆ ನಡೆಯಲಿದೆ. ರಾಜತಾಂತ್ರಿಕ ಮಟ್ಟದಲ್ಲೂ ಪರಿಹಾರ ಸಾಧ್ಯವಿದೆ. ಚೀನಾ ಕೂಡಾ ಸಮಸ್ಯೆ ಬಗೆಹರಿಸುವ ಬಗ್ಗೆ ಯೋಚಿಸಬೇಕಿದೆ.  ಭಾರತ ಯಾವುದೇ ದೇಶದ ಸ್ವಾಭಿಮಾನಕ್ಕೆ ಧಕ್ಕೆ ತರಲ್ಲ. ಭಾರತ ಕೂಡಾ ತನ್ನ ಸ್ವಾಭಿಮಾನಕ್ಕೆ ಧಕ್ಕೆ ಆದರೆ ಸಹಿಸಲ್ಲ.

ನಾನು ಯಾವುದೇ ದೇಶವನ್ನು ಶತ್ರು ಎಂದು ಭಾವಿಸಲ್ಲ. ಅವರು ನಮ್ಮ ನೆರೆಹೊರೆಯವರು ಎಂದು ಭಾವಿಸುತ್ತೇನೆ. ಪಾಕಿಸ್ತಾನ ಕೂಡಾ ನೆರೆರಾಷ್ಟ್ರ. ಆದರೆ ಅದರ ನೀಚಬುದ್ಧಿಗಳನ್ನು ಬಿಟ್ಟಿಲ್ಲ. ನಾವು ವಿಶ್ವದಲ್ಲಿ ಯಾವ ರಾಷ್ಟ್ರವನ್ನೂ ವೈರಿ ಎಂದು ಭಾವಿಸಲ್ಲ. ಆದರೆ ಭಾರತದ ಸ್ವಾಭಿಮಾನಕ್ಕೆ ಧಕ್ಕೆ ತಂದರೆ ಆಗ ತಕ್ಕ ಉತ್ತರ ನೀಡುತ್ತೇವೆ ಎಂದು ರಾಜ್‌ನಾಥ್‌ ಸಿಂಗ್‌ ಹೇಳಿದ್ದಾರೆ.

LEAVE A REPLY

Please enter your comment!
Please enter your name here