ಅದುಮಿಟ್ಟಿದ್ದ ಅ”ಸಂತೋಷ” ಸ್ಫೋಟ..ಯಡಿಯೂರಪ್ಪ ಬುಡಕ್ಕೆ ಬಿಜೆಪಿ “ಭಿನ್ನಮತದ ವೈರಸ್”

ಇಡೀ ರಾಜ್ಯ ಕೊರೋನಾ ಎಂಬ ಮೂರಕ್ಷರದ, ಕಣ್ಣಿಗೆ ಕಾಣದ ರಾಕ್ಷಸನ ಕೋರೆ ಹಲ್ಲುಗಳ ಇಕ್ಕಳಕ್ಕೆ ಸಿಲುಕಿ ವಿಲವಿಲ ಎಂದು ಒದ್ದಾಡುತ್ತಿದೆ.

ಕೇಂದ್ರ ಸರ್ಕಾರ ಬಿಡಿಗಾಸು ಬಿಚ್ಚದಿದ್ದರೂ, ಸಂಪುಟ ಸಹೋದ್ಯೋಗಿಗಳು ಸಹಕರಿಸದೇ ಇದಕ್ಕೂ ತಮಗೂ ಏನೂ ಸಂಬಂಧವಿಲ್ಲ ಎಂಬಂತೆ ಕುಳಿತಿದ್ದರೂ, ಬೊಕ್ಕಸ ಕೂಡ ಖಾಲಿ ಆಗುತ್ತಾ ಬಂದಿದ್ದರೂ ರಾಜ್ಯವನ್ನು ಕೊರೋನಾದಿಂದ ಬಚಾವು ಮಾಡಲು 77 ರ ಹಿರಿಜೀವ ಮುಖ್ಯಮಂತ್ರಿ ಯಡಿಯೂರಪ್ಪ ದಿನದ ಬಹುಪಾಲನ್ನು ವಿನಿಯೋಗಿಸಿ ರಾಜ್ಯದ ಶ್ರೇಯಸ್ಸಿಗೆ ಏಕಾಂಗಿಯಾಗಿ ಶ್ರಮಿಸುತ್ತಿದ್ದಾರೆ.

ಒಂದು ಹಂತದಲ್ಲಿ ಅವರು ಕೈಗೊಂಡ ಕ್ರಮಗಳಿಂದ ಕೊರೋನಾ ನಿಯಂತ್ರಣಕ್ಕೆ ಬಂದಿತ್ತು ಕೂಡ. ಆದರೆ, ಕೇಂದ್ರ ಸರ್ಕಾರದ ಹಲವು ಅವೈಜ್ಞಾನಿಕ ಕ್ರಮಗಳ ಕಾರಣ ಕೊರೋನಾ ಸೋಂಕಿತರ ಸಂಖ್ಯೆ ಈಗ ರಾಜ್ಯದಲ್ಲೂ ಹೆಚ್ಚಾಗುತ್ತಿದೆ.

ಇಂಥಹ ಸಂದರ್ಭದಲ್ಲಿ ಬಿಜೆಪಿ ಮಂತ್ರಿಗಳು, ಶಾಸಕರು ಮುಖ್ಯಮಂತ್ರಿಯ ಹೆಗಲಿಗೆ ಹೆಗಲು ಕೊಟ್ಟು ದುಡಿಯಬೇಕಿತ್ತು. ಆದರೆ ಇಲ್ಲಿ ಆಗುತ್ತಿರುವುದೇ ಬೇರೆ. ಜನ ಯಾವುದನ್ನು ನಿರೀಕ್ಷೆ ಮಾಡಿರಲಿಲ್ಲವೋ ಅದೇ ಆಗುತ್ತಿದೆ. ಮೂರು ತಿಂಗಳಿಂದ ಕಾಣಿಸಿಕೊಳ್ಳದ ಬಂಡಾಯ, ಬಿಜೆಪಿಯಲ್ಲಿನ ಅಸಂತೋಷ ಈಗ ಬಹಿರಂಗವಾಗಿ ಕಾಣಿಸಿಕೊಂಡಿದೆ.

ಭವಿಷ್ಯದ ಬಗ್ಗೆ ಚಿಂತೆ ಇಲ್ಲ- ಬಂಡಾಯಗಾರರಿಗೆ ವರ್ತಮಾನದ ಚಿಂತೆ.

11 ತಿಂಗಳ ಹಿಂದೆ ಕಾಂಗ್ರೆಸ್ – ಜೆಡಿಎಸ್ ಪಕ್ಷದ ಭಿನ್ನರಿಗೆ ಕಿವಿಯೂದಿ,ಅಧಿಕಾರದ ಆಮಿಷ ತೋರಿಸಿ ಕುಮಾರಸ್ವಾಮಿ ನೇತೃತ್ವದ ಸರ್ಕಾರವನ್ನು ಕೆಡವಿದ ಯಡಿಯೂರಪ್ಪ ಮುಂದೆ ಮುಖ್ಯಮಂತ್ರಿ ಆಗಿದ್ದು ಇತಿಹಾಸ.

ಸಮ್ಮಿಶ್ರ ಸರ್ಕಾರ ಕೆಡಹುವ ಹಂತದಲ್ಲಿ ಬಿ ಎಸ್ ಯಡಿಯೂರಪ್ಪಗೆ ಸಾಥ್ ಕೊಡದೇ ಮನೆಯಲ್ಲೆ ತಣ್ಣಗೆ ಕುಳಿತು ರಾಜಕೀಯ ಮೇಲಾಟ ನೋಡುತ್ತಾ ತಣ್ಣಗೆ ಕುಳಿತಿದ್ದವರು, ಸರ್ಕಾರ ರಚನೆಯಾದ ಕೂಡಲೇ ದಿಗ್ಗನೆ ಎದ್ದು ಕುಳಿತರು. ಮಂತ್ರಿ ಆಗಲು ನಾನಾ ಕಸರತ್ತುಗಳನ್ನು ನಡೆಸಿದರು.

ಹೀಗೆ ನಾನಾ ಕಸರತ್ತು, ಲಾಬಿ ನಡೆಸಿಯೂ ಮಂತ್ರಿಯಾಗದೇ ಉಳಿದವರಲ್ಲಿ ಮಾಜಿ ಮಂತ್ರಿಗಳಾದ ಉಮೇಶ್ ಕತ್ತಿ, ಬಸನಗೌಡ ಪಾಟೀಲ್, ಮುರುಗೇಶ ನಿರಾಣಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಇವರ ಅಸಮಧಾನಗಳಿಗೆ ಆಗೀಗ ಮುಖ್ಯಮಂತ್ರಿಗಳು ಮುಲಾಮು ಹೆಚ್ಚುತ್ತಲೇ ಇದ್ದರು. ಆದರೆ ಯಾವುದೊಂದು ಈಡೇರುವ ಲಕ್ಷಣಗಳು ಕಂಡುಬರಲಿಲ್ಲ. ಹೀಗಾಗಿ ಮಂತ್ರಿ ಸ್ಥಾನ ವಂಚಿತರು ಒಳಗೊಳಗೆ ಕುದಿಯತೊಡಗಿದ್ದರು. ಅದೀಗ ಸ್ಪೋಟಗೊಂಡಿದೆ.

ಮುಖ್ಯಮಂತ್ರಿಗಳು ಹೇಳಿದ ಭವಿಷ್ಯ ನಂಬಿಕೊಂಡು ಕುಳಿತರೇ ಇನ್ನೂ ಮೂರು ವರ್ಷ ಹೀಗೆ ಖಾಲಿಯಾಗಿ ಕುಳಿತಿರಬೇಕಾಗುತ್ತದೆ. ವರ್ತಮಾನದಲ್ಲಿ ಕಿಮ್ಮತ್ತು, ಕವಡೆ ಕಾಸು ಎರಡು ಇಲ್ಲವಾಗುತ್ತವೆ ಎಂಬುದನ್ನು ಅರಿತ ಮೂವರು ರಾಜಕಾರಣಿಗಳು ರಾಜ್ಯಸಭೆ ಮತ್ತು ವಿಧಾನಪರಿಷತ್ ಚುನಾವಣೆಯ ಹೊಸ್ತಿಲಲ್ಲಿ ಬಿಜೆಪಿ ಸರ್ಕಾರದ ಪಡಸಾಲೆಯಲ್ಲಿ ಬಂಡಾಯದ ಹೊಗೆ ಎಬ್ಬಿಸಿದ್ದಾರೆ. ಕಳೆದ 15 ದಿನಗಳಲ್ಲಿ ಎರಡೆರಡು ಬಾರಿ ತಮ್ಮ ಬೆಂಬಲಿಗರೊಡನೆ ರಹಸ್ಯ ಸಭೆ ಸೇರಿ, ನಂತರ ಅದು ಸೋರಿಕೆ ಆಗುವಂತೆ ನೋಡಿಕೊಂಡು ಶಾಂತ ಸರೋವರದಲ್ಲಿ ದೊಡ್ಡ ಅಲೆಗಳನ್ನು ಸೃಷ್ಟಿಸಿದ್ದಾರೆ.

ಸದ್ಯದಲ್ಲೆ ರಾಜ್ಯಸಭೆ ಮತ್ತು ಪರಿಷತ್ ಸದಸ್ಯ ಸ್ಥಾನಗಳಿಗೆ ಚುನಾವಣೆ ಎದುರಾಗಲಿದೆ. ಈ ಚುನಾವಣೆ ಗೆಲ್ಲುವುದು ಬಿಜೆಪಿಗೆ ಪ್ರತಿಷ್ಠೆಯ ಪ್ರಶ್ನೆ. ಈ ಮೂವರ ಜೊತೆಗೆ ಉತ್ತರ ಕರ್ನಾಟಕದ ಹಲವು ಅಸಮಾಧಾನಿತ ಶಾಸಕರು ಕೈಕೊಟ್ಟರೂ ಕಮಲ ಪಕ್ಷದ ಪ್ರತಿಷ್ಠೆಗೆ ಭಂಗ ಬರುವುದು ಗ್ಯಾರಂಟಿ. ಇಂತಹ ಸಂದರ್ಭದಲ್ಲಿ ಬಂಡಾಯದ ದಾಳ ಉರುಳಿಸಿರುವ ಈ ಬಂಡಾಯಗಾರರು ತಮ್ಮ ಬೇಳೆ ಬೇಯಿಸಿಕೊಳ್ಳಲು ಯತ್ನ ಮಾಡುತ್ತಿದ್ದಾರೆ. ತಮ್ಮ ಬಹುದಿನಗಳ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಜ್ಜಾಗಿ ಬಂಡಾಯದ ಬಾವುಟ ಹಾರಿಸಿದ್ದಾರೆ.

ಸಾಧ್ಯ ಆದರೆ ಅಖಂಡ ಕರ್ನಾಟಕದ ಮುಖ್ಯಮಂತ್ರಿ ಆಗುವ ಕನಸು ಕಂಡಿರುವ ಉಮೇಶ್ ಕತ್ತಿಗೆ, ಇದು ಸಾಧ್ಯ ಅಗದಿದ್ದರೆ ಉತ್ತರ ಕರ್ನಾಟಕದ ಮುಖ್ಯಮಂತ್ರಿ ಆಗಬೇಕು ಎಂಬ ಅಸೆಯನ್ನು ಹಲವು ಬಾರಿ ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ. ಆದರೆ, ಅವರೆಷ್ಟೇ ಲಾಬಿ ಮಾಡಿದರೂ ಯಡಿಯೂರಪ್ಪ ಸಂಪುಟದಲ್ಲಿ ಮಂತ್ರಿಯಾಗುವ ಕಾಲ ಕೂಡಿಬಂದಿಲ್ಲ. ಜೊತೆಗೆ ಲೋಕಸಭೆ ಚುನಾವಣೆಗೆ ತಮ್ಮ ರಮೇಶ ಕತ್ತಿಯನ್ನು ನಿಲ್ಲಿಸಿ ಗೆಲ್ಲಿಸಿಕೊಳ್ಳಬೇಕೆಂಬ ಆಸೆಯೂ ಈಡೇರಿರಲಿಲ್ಲ.

ಈ ಎರಡು ಅಸೆಗಳನ್ನು ಈಗ ಈಡೇರಿಸಿಕೊಳ್ಳಲು ಕತ್ತಿಯವರು ಪಣ ತೊಟ್ಟಂತೆ ಇದೆ. ಕಷ್ಟಕಾಲದಲ್ಲಿ ಯಡಿಯೂರಪ್ಪ ಕೊಟ್ಟ ಮಾತಿನಂತೆ ತಮ್ಮನ್ನು ಮಂತ್ರಿ ಮಾಡಬೇಕು.. ಜೊತೆಗೆ ರಾಜ್ಯಸಭಾ ಟಿಕೆಟ್ ರಮೇಶ್ ಕತ್ತಿಯವರಿಗೆ ಸಿಗಬೇಕು ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. ಎರಡೂ ಬೇಡಿಕೆಗಳೂ ಈಡೇರಲೇಬೇಕು.. ಇಲ್ಲದಿದ್ದರೇ ಯಾವುದೇ ಹಂತಕ್ಕೆ ಬೇಕಿದ್ದರೂ ನಾನು ಸಮರ್ಥ ಎಂಬ ಸಂದೇಶವನ್ನು ಉಮೇಶ್ ಕತ್ತಿ ಸ್ಪಷ್ಟವಾಗಿ ರವಾನಿಸುತ್ತಿದ್ದಾರೆ. ಮೊದಲೇ ಪಕ್ಷದ ಚಿನ್ಹೆ ನಂಬಿಕೊಂಡು ಗೆಲ್ಲುವ ವ್ಯಕ್ತಿ ಇವರಲ್ಲ.ವೈಯಕ್ತಿಕ ಚರಿಷ್ಮಾದಿಂದ ಗೆದ್ದು ಬರುವ ರಾಜ್ಯದ ಕೆಲವೇ ಕೆಲವು ರಾಜಕಾರಣಿಗಳ ಪೈಕಿ ಇವರು ಒಬ್ಬರು.

ಇನ್ನು ಮಂತ್ರಿಮಂಡಲ ರಚನೆಯಾದ ದಿನದಿಂದಲೂ ತಾನು ಅದರಲ್ಲಿ ಇಲ್ವಲ್ಲ ಎಂದು ಕುದಿಯುತ್ತಾ ಇರುವವರು ಮತ್ತೊಬ್ಬ ಸಕ್ಕರೆ ಧಣಿ‌ ಮುರುಗೇಶ ನಿರಾಣಿ. ಯಡಿಯೂರಪ್ಪ ಮೊದಲ ಬಾರಿಗೆ ಮುಖ್ಯಮಂತ್ರಿ ಆಗಿದ್ದಾಗ ಭಾರಿ ಕೈಗಾರಿಕೆ ಸಚಿವರಾಗಿ ಸ್ವಲ್ಪ ಭಾರಿಯೇ ಎನ್ನುವಷ್ಟು ಸದ್ದು ಮಾಡಿದ್ದರು. ಆದರೆ ನಂತರದ ದಿನಗಳಲ್ಲಿ ಅದೇಕೋ ಏನೋ ಯಡಿಯೂರಪ್ಪ ಆಂತರಿಕ ವಲಯದಿಂದ ದೂರ ಆಗಿದ್ದರು. ಅದು ಈಗಲೂ ಸರಿ ಹೋಗಿಲ್ಲ. ಇಲ್ಲದಿದ್ದರೆ ನಿರಾಣಿ ಮಂತ್ರಿ ಆಗಬೇಕಿತ್ತು.

ಕೆಲ ತಿಂಗಳ ಹಿಂದೆ ತಮ್ಮ ಸಮುದಾಯದ‌ ಮಠಾಧೀಶರಿಂದ ತುಂಬಿದ ಸಭೆಯಲ್ಲಿ ಮುರುಗೇಶ ನಿರಾಣಿಗೆ ಮಂತ್ರಿ ಮಾಡದಿದ್ದರೆ ಎಚ್ಚರಿಕೆ ಎಂದು ತುಂಬಿದ ಸಭೆಯಲ್ಲಿ ಹೇಳಿಸಿದ್ದರು. ಇದರಿಂದ ಅಲ್ಲೇ ಸ್ಪೋಟಗೊಂಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ, ಇಂತಹ ಬೆದರಿಕೆಗಳಿಗೆಲ್ಲ ನಾನು ಬೆದರೋನಲ್ಲ. ಬೇಕಿದ್ರೆ ರಾಜೀನಾಮೆ ಕೊಟ್ಟು ಹೋಗ್ತೀನಿ ಅಂತಾ ಗುಡುಗಿದ್ದರು. ಪಕ್ಕದಲ್ಲೇ ಇದ್ದ ಮುರುಗೇಶ್ ನಿರಾಣಿ ಮೇಲೆಯೂ ಗರಂ ಆಗಿದ್ದು ಕಣ್ಣಿಗೆ ಕಟ್ಟಿದಂತಿದೆ. ನಂತರ ಮಾಧ್ಯಮಗಳ ಜೊತೆ ಮಾತನಾಡಿದ್ದ ನಿರಾಣಿ, ಅಂತಹದ್ದೇನು ಆಗಿಯೇ ಇಲ್ಲ. ನಾವು ಯಡಿಯೂರಪ್ಪ ಚೆನ್ನಾಗಿಯೇ ಇದ್ದೇವೆ ಎಂದು ತೇಪೆ ಹಚ್ಚುವ ಕೆಲಸ ಮಾಡಿದ್ದರು. ಆದರೂ ತಾವು ಮಂತ್ರಿ ಆಗಲಿಲ್ವಲ್ಲ ಎಂಬ ಕೊರಗು ಕಾಡುತ್ತಿತ್ತು. ಸಂದರ್ಭಕ್ಕಾಗಿ ಮುರುಗೇಶ ನಿರಾಣಿ ಕಾಯುತ್ತಿದ್ದರು.

ಇನ್ನು ಬಸನಗೌಡ ಪಾಟೀಲ ಯತ್ನಾಳ.. ಮೂಲತಃ ಬಂಡಾಯದ‌ ಮನಸ್ಥಿತಿಯವರು. ತಮ್ಮ ವಾಚಾಳತನದಿಂದಲೇ ಬಿಜೆಪಿಯಿಂದ ಹೊರಗೆ ಹೋಗಿ ಎಲ್ಲಿಯೂ ಸಲ್ಲಲು ಆಗದೇ ಯಡಿಯೂರಪ್ಪ ಬೆಂಬಲದೊಂದಿಗೆ, ಹಲವರ ವಿರೋಧದ ನಡುವೆಯೂ ಮತ್ತೆ ಕಮಲದ ಗೂಡು ಸೇರಿದ್ದರು. ಟಿಕೆಟ್ ಗಿಟ್ಟಿಸಿ ವಿಧಾನಸಭೆಗೂ ಆರಿಸಿಬಂದರು. ಯಡಿಯೂರಪ್ಪ ಮುಂಬೈ ಟೀಂ ಬೆಂಬಲದೊಂದಿಗೆ ಸರ್ಕಾರ ರಚಿಸಿದಾಗ ಮಂತ್ರಿ ಆಗುವ ಕನಸು ಕಂಡಿದ್ದರು. ಆದರೆ ಕೆಲವು ಅನಿವಾರ್ಯತೆಗಳ ಕಾರಣ ಯತ್ನಾಳರ ಕುರ್ಚಿ ಬಯಕೆ ಈಡೇರಲಿಲ್ಲ. ಜೊತೆಗೆ ಆಡಳಿತದ ಮರ್ಜಿಗೆ ಸಿಲುಕಿದ ಯಡಿಯೂರಪ್ಪಗೆ ಇವರನ್ನೆಲ್ಲಾ ಸರಿಯಾಗಿ ನೋಡಿಕೊಳ್ಳುವ ಸಮಯ ಸಿಗಲಿಲ್ಲ. ಪರಿಣಾಮ ಯತ್ನಾಳರಲ್ಲಿ ಅಸಮಾಧಾನ ಮಡುಗಟ್ಟಿತ್ತು. ಅದೀಗ ಭುಗಿಲೆದ್ದಿದೆ.

ಈ ಮೂವರು ಇದೀಗ ಒಂದೇ ಉದ್ದೇಶದಿಂದ ಬಂಡಾಯದ ದಾಳ ಉರುಳಿಸಿದ್ದಾರೆ. ತಮ್ಮನ್ನು ಮಂತ್ರಿ ಮಾಡದೇ, ನಿರ್ಲಕ್ಷಿಸಿದ ಯಡಿಯೂರಪ್ಪರನ್ನು ಸಿಎಂ ಗಾದಿಯಿಂದ ಇಳಿಸಬೇಕು ಎಂದು ಪಣ ತೊಟ್ಟು ಕಳೆದ 15 ದಿನಗಳಿಂದ ಬೆಂಬಲಿಗ ಶಾಸಕರ ಜೊತೆ ಎರಡ್ಮೂರು ಸಭೆಗಳನ್ನು ನಡೆಸಿ ಅಸಂತೋಷದ ಸಂದೇಶ ರವಾನಿಸಿದ್ದಾರೆ.

ಇದರ ಸುಳಿವನ್ನು ವಾರದ ಹಿಂದೆಯೇ ಅರಿತಿರುವ ಮುಖ್ಯಮಂತ್ರಿ ಯಡಿಯೂರಪ್ಪ ಒಬ್ಬೊಬ್ಬರನ್ನೇ ಕರೆಯಿಸಿ ಆಸೆ ಆಮಿಷಗಳ ಮೂಲಕ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ. ಅದರೆ ಮೇಲ್ನೋಟಕ್ಕೆ ಇದು ಕೆಲಸ ಮಾಡಿದಂತೆ ಕಾಣುತ್ತಿಲ್ಲ. ದೆಹಲಿಯಲ್ಲಿ ಕುಳಿತ ಜಗನ್ನಾಟಕ ಸೂತ್ರಧಾರಿ ಯಾವ ಪ್ಲಾನು ಹಾಕಿಕೊಟ್ಟಿದ್ದಾರೋ ಗೊತ್ತಿಲ್ಲ. ಆದರೆ, ಕೊರೋನಾ ಕಾಲದಲ್ಲಿ ರಾಜ್ಯ ಬಿಜೆಪಿಯಲ್ಲಿ ಶುರುವಾಗಿರುವ ಈ ರಾಜಕೀಯ ಮೇಲಾಟದಿಂದ ಜನ ಬೇಸರಿಸಿಕೊಳ್ಳುತ್ತಿರುವುದು ಅಷ್ಟೇ ಸತ್ಯ.

LEAVE A REPLY

Please enter your comment!
Please enter your name here