ಅದಾನಿ ಕಂಪನಿಯಲ್ಲಿ ಹೂಡಿಕೆ ಇರುವ ಮೂರು ಕಂಪನಿಗಳ 45 ಸಾವಿರ ಕೋಟಿ ರೂ. ಮೊತ್ತ ಷೇರು ಜಫ್ತಿ

ಗುಜರಾತ್ ಮೂಲದ ಗೌತಮ್ ಅದಾನಿಗೆ ಸೇರಿದ ಮೂರು ಕಂಪನಿಗಳ 45 ಸಾವಿರ ಕೋಟಿ ರೂಪಾಯಿ ಷೇರುಗಳನ್ನು ರಾಷ್ಟ್ರೀಯ ಷೇರು ಠೇವಣಿ ನಿಯಮಿತ ಜಪ್ತಿ ಮಾಡಿದೆ ಎಂದು ವರದಿ ಆಗಿದೆ.

ಅಲ್ಬುಲಾ ಇನ್‍ವೆಸ್ಟ್‍ಮೆಂಟ್ ಫಂಡ್, ಕ್ರೆಸ್ಟಾ ಫಂಡ್ ಮತ್ತು ಎಪಿಎಂಸ್ ಫಂಡ್‍ನ ಖಾತೆಗಳನ್ನು ಜಪ್ತಿ ಮಾಡಲಾಗಿದೆ. ಈ ಮೂರು ಖಾತೆಗಳಲ್ಲಿ 45 ಸಾವಿರ ಕೋಟಿ ರೂಪಾಯಿ ಮೊತ್ತದ ಷೇರುಗಳಿವೆ.

ಎನ್‍ಎಸ್‍ಡಿಎಲ್ ವೆಬ್‍ಸೈಟ್ ಪ್ರಕಾರ ಮೇ 31ರಂದು ಈ ಮೂರು ಖಾತೆಗಳನ್ನು ಜಪ್ತಿ ಮಾಡಲಾಗಿದೆ ಎಂದು ಪ್ರಮುಖ ಇಂಗ್ಲೀಷ್ ದೈನಿಕ ವರದಿ ಮಾಡಿದೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಮಾಲೀಕರ ಬಗ್ಗೆ ಅಗತ್ಯ ದಾಖಲೆಗಳನ್ನು ಒದಗಿಸದೇ ಇರುವುದು ಮೂರು ಖಾತೆಗಳ ಜಫ್ತಿಗೆ ಕಾರಣ ಎಂದು ತಿಳಿದುಬಂದಿದೆ.

ವಿಶೇಷ ಎಂದರೆ ಈ ಮೂರು ಕಂಪನಿಗಳು ಮಾರಿಷಷ್ ರಾಜಧಾನಿ ಫೋರ್ಟ್ ಲೂಯಿಸ್‍ನ ಒಂದೇ ವಿಳಾಸದಲ್ಲಿ ನೋಂದಣಿ ಆಗಿವೆ. ಆದರೆ ಈ ಕಂಪನಿಗಳ ಹೆಸರಲ್ಲಿ ಯಾವುದೇ ವೆಬ್‍ಸೈಟ್ ಇಲ್ಲ.

ಈ ಮೂರು ಕಂಪನಿಗಳು ಅದಾನಿ ಎಂಟರ್‍ಪ್ರೈಸಸ್‍ನಲ್ಲಿ ಶೇಕಡಾ 6.82ರಷ್ಟು, ಅದಾನಿ ಟ್ರಾನ್ಸ್‍ಮಿಷನ್‍ನಲ್ಲಿ ಶೇಕಡಾ 8.03ರಷ್ಟು, ಅದಾನಿ ಟೋಟಲ್ ಗ್ಯಾಸ್‍ನಲ್ಲಿ ಶೇ.5.92ರಷ್ಟು ಮತ್ತು ಅದಾನಿ ಗ್ರೀನ್‍ನಲ್ಲಿ ಶೇಕಡಾ 3.58ರಷ್ಟು ಪಾಲು ಹೊಂದಿವೆ.

ಅದಾನಿ ಹೆಸರಲ್ಲಿ ಒಟ್ಟು ಆರು ಕಂಪನಿಗಳಿವೆ. ಉಳಿದ ಎರಡು ಕಂಪನಿಗಳೆಂದರೆ ಅದಾನಿ ಪೋಟ್ರ್ಸ್ ಮತ್ತು ಅದಾನಿ ಪವರ್.

ಇದರ ಜೊತೆಗೆ ಷೇರು ಮೌಲ್ಯದ ಏರಿಕೆಯ ಹಿಂದಿನ ಕಾರಣದ ಬಗ್ಗೆಯೂ ಭಾರತೀಯ ಷೇರು ವಿನಿಮಯ ಮಂಡಳಿ ತನಿಖೆ ನಡೆಸುತ್ತಿದೆ ಎಂದೂ ಪತ್ರಿಕೆ ವರದಿ ಮಾಡಿದೆ.

ಕೇವಲ 1 ವರ್ಷದಲ್ಲಿ ಅದಾನಿ ಕಂಪನಿಗಳ ಷೇರುಗಳ ಮೌಲ್ಯ ಶೇ.200ರಿಂದ ಶೇ.1000ದಷ್ಟು ಹೆಚ್ಚಳ ಆಗಿರುವ ಆ ಬಗ್ಗೆ ತನಿಖೆ ಆಗುತ್ತಿದೆ. ಟ್ರಾನ್ಸ್‍ಮಿಷನ್ ಷೇರು ಶೇ.669ರಷ್ಟು, ಅದಾನಿ ಟೋಟಲ್ ಗ್ಯಾಸ್ ಶೇ.339ರಷ್ಟು, ಅದಾನಿ ಎಂಟರ್‍ಪ್ರೈಸಸ್ ಶೇ.972ರಷ್ಟು, ಅದಾನಿ ಗ್ರೀನ್‍ನ ಷೇರು ಶೇ.254ರಷ್ಟು ಮೌಲ್ಯ ಹೆಚ್ಚಳ ಆಗಿದೆ.

ವರದಿಯ ಬೆನ್ನಲ್ಲೇ ಇವತ್ತು ಅದಾನಿ ಕಂಪನಿಗಳ ಷೇರು ಮೌಲ್ಯ ಗಣನೀಯ ಪ್ರಮಾಣದಲ್ಲಿ ಕುಸಿದಿದೆ.

LEAVE A REPLY

Please enter your comment!
Please enter your name here