ಹೋರಾಟಕ್ಕೆ ಮಣಿದ ಸರ್ಕಾರ : ಅತಿಥಿ ಉಪನ್ಯಾಸಕರಿಗೆ ವೇತನ ಹೆಚ್ಚಳದ ಸಿಹಿಸುದ್ದಿ

ಮಕರ ಸಂಕ್ರಾಂತಿ ಹಬ್ಬದಂದೇ ರಾಜ್ಯ ಸರ್ಕಾರ ಅತಿಥಿ ಉಪನ್ಯಾಸಕರಿಗೆ ವೇತನ ಹೆಚ್ಚಳ ಬಗ್ಗೆ ಘೋಷಣೆ ಮಾಡುವ ಮೂಲಕ ಸಿಹಿ ಸುದ್ದಿ ನೀಡಿದೆ. ಈ ಕುರಿತು ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ ಎಂದು ಸಚಿವ ಸಿ.ಎನ್.ಅಶ್ವತ್ಥನಾರಾಯಣ ಮಾಹಿತಿ ನೀಡಿದ್ದಾರೆ.ಆ ಮೂಲಕ ಸರ್ಕಾರ ಅತಿಥಿ ಉಪನ್ಯಾಸಕರ ಬಹುದಿನದ ಹೋರಾಟಕ್ಕೆ ಮಣಿದಿದೆ.

5 ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಸೇವೆ ಸಲ್ಲಿಸಿದ ಹಾಗೂ ಯುಜಿಸಿ ವಿದ್ಯಾರ್ಹತೆ ಹೊಂದಿರುವ ಅತಿಥಿ ಉಪನ್ಯಾಸಕರ ವೇತನವನ್ನು 32 ಸಾವಿರ ರೂ.ಗೆ ಹೆಚ್ಚಿಸಲಾಗಿದೆ. 5 ವರ್ಷಕ್ಕಿಂತ ಕಡಿಮೆ ಅವಧಿಗೆ ಸೇವೆ ಸಲ್ಲಿಸಿದವರ ವೇತನ 30 ಸಾವಿರ ರೂ.ಗೆ, 5 ವರ್ಷಕ್ಕಿಂತ ಹೆಚ್ಚಿನ ಅವಧಿ ಸೇವೆ ಸಲ್ಲಿಸಿದ್ದರೂ ಯುಜಿಸಿ ನಿಗದಿ ಪಡಿಸಿದ ಅರ್ಹತೆ ಇಲ್ಲದೇ ಇರುವವರ ವೇತನ 28 ಸಾವಿರ ರೂ. ಏರಿಕೆ ಮಾಡಲಾಗಿದೆ ಮತ್ತು 5 ವರ್ಷ ಸೇವಾವಧಿ ಪೂರೈಸಿಲ್ಲದ ಹಾಗೂ ಯುಜಿಸಿ ಅರ್ಹತೆ ಪಡೆಯದವರಿಗೆ 26 ಸಾವಿರ ರೂ.ಗೆ ಏರಿಕೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಹಾಗೆಯೇ, ಅತಿಥಿ ಉಪನ್ಯಾಸಕರ ಕಾರ್ಯಭಾರ ಅವಧಿ 8 ರಿಂದ 10 ಗಂಟೆ ಇದ್ದುದನ್ನು 15 ಗಂಟೆಗಳಿಗೆ ಹೆಚ್ಚಿಸಲಾಗಿದೆ. ಉಪನ್ಯಾಸಕರ ಅವಧಿ ಸೆಮಿಸ್ಟರ್ ಬದಲು, ಒಂದು ಶೈಕ್ಷಣಿಕ ವರ್ಷಕ್ಕೆ ನಿಗದಿ ಮಾಡಲಾಗಿದೆ ಎಂದೂ ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ನೂತನ ನಿಬಂಧನೆಯನ್ನು ಜಾರಿಗೊಳಿಸಿರುವ ಸರ್ಕಾರ ಅತಿಥಿ ಉಪನ್ಯಾಸಕರಾಗಿ ಆಯ್ಕೆಯಾಗಿ 3 ವರ್ಷದ ಒಳಗಾಗಿ ಯುಜಿಸಿ ಅರ್ಹತೆಯನ್ನು ಕಡ್ಡಾಯವಾಗಿ ಪಡೆಯಲೇಬೇಕೆಂದು ಹೇಳಿದೆ.

LEAVE A REPLY

Please enter your comment!
Please enter your name here