ಅಟ್ರಾಸಿಟಿ ಕೇಸ್.. ಸುಪ್ರೀಂಕೋರ್ಟ್ ಹೇಳಿದ್ದೇನು..?

ನಾಲ್ಕು ಗೋಡೆಗಳ ಮಧ್ಯೆ, ಸಾಕ್ಷಿಗಳ್ಯಾರು ಇಲ್ಲದ ಕಡೆ ಎಸ್ಸಿ-ಎಸ್ಟಿ ಸಮುದಾಯದ ವ್ಯಕ್ತಿಯನ್ನು ದೂಷಣೆ ಮಾಡಲಾಗಿದೆ/ ಬೆದರಿಸಲಾಗಿದೆ ಎಂಬ ಆರೋಪವನ್ನು ಎಸ್ಸಿ ಎಸ್ಟಿಗಳ ಮೇಲಿನ ದೌರ್ಜನ್ಯ ನಿಗ್ರಹ ಕಾಯ್ದೆ(ಅಟ್ರಾಸಿಟಿ)ಯಡಿ ಪರಿಗಣಿಸಲಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.  ಓರ್ವ ಮಹಿಳೆಯ ಮನೆಗೆ ಬಂದ ವ್ಯಕ್ತಿ, ಆಕೆಯನ್ನು ನಿಂದಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣವನ್ನು ರದ್ದು ಮಾಡಿ ಸುಪ್ರೀಂಕೋರ್ಟ್ ತೀರ್ಪು ನೀಡಿದೆ.

ಸಮಾಜದ ದಮನಿತ, ಬಡ ವರ್ಗಕ್ಕೆ ಸೇರಿದ ವ್ಯಕ್ತಿಗಳಿಗೆ ಮಾಡುವ ಅವಮಾನ,ಕಿರುಕುಳ, ಅಮಾನುಷ ಕೃತ್ಯಗಳು ಸಾರ್ವಜನಿಕ ಪ್ರದೇಶದಲ್ಲಿ ಅಥವಾ ಜನಗಳ ದೃಷ್ಟಿಗೆ ಬೀಳುವ ಕಡೆ ನಡೆದಿದ್ದರೇ ಅದನ್ನು ಅಟ್ರಾಸಿಟಿ ಕಾಯ್ದೆಯಡಿ ಅಪರಾಧ ಎಂದು ಪರಿಗಣಿಸಬಹುದು ಎಂದು ಜಸ್ಟೀಸ್ ನಾಗೇಶ್ವರ್ ರಾವ್, ಹೇಮಂತ್ ಗುಪ್ತಾ,ಅಜಯ್ ರಸ್ತೊಗಿ ಅವರನ್ನು ಒಳಗೊಂಡ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಸಾರ್ವಜನಿಕ ಪ್ರದೇಶ ಮತ್ತು ಜನರ ದೃಷ್ಟಿಗೆ ಬೀಳುವ ಪ್ರದೇಶಗಳ ನಡುವೆ ಇರುವ ವ್ಯತ್ಯಾಸವನ್ನು ವಿವರಿಸಲು 2008ರಲ್ಲಿ ನೀಡಲಾದ ತೀರ್ಪನ್ನು ನ್ಯಾಯಪೀಟ ಆಧಾರವಾಗಿ ಬಳಸಿಕೊಂಡಿದೆ. ಒಂದು ಕಟ್ಟಡ/ ಮನೆಯ ಹೊರಗೆ ನಡೆಯುವ ಘಟನೆಗಳನ್ನು ದಾರಿಹೋಕರು, ಅಕ್ಕಪಕ್ಕದ ಮನೆಯವರು ನೋಡಲು ಸಾಧ್ಯವಿದೆ. ಇದನ್ನು ಜನರ ದೃಷ್ಟಿಗೆ ಬೀಳುವ ಪ್ರದೇಶ ಎಂದು ಪರಿಗಣಿಸಬಹುದು. ಸದ್ಯ ನ್ಯಾಯಪೀಠದ ಮುಂದೆ ಬಂದಿರುವ ಪ್ರಕರಣದಲ್ಲಿ, ಅಪರಾಧ ನಡೆದಿದೆ ಎನ್ನಲಾಗಿರುವ ಸಂದರ್ಭದಲ್ಲಿ ಆ‌ ಮಹಿಳೆ ಮನೆಯ ಕೊಠಡಿಯಲ್ಲೇ ಇದ್ದರು. ಅಲ್ಲಿ ನಡೆದ ಘಟನೆಯನ್ನು ಮನೆಯ ಸದಸ್ಯರು ಬಿಟ್ಟು ಬೇರೆ ಯಾರೂ ಕೂಡ ನೋಡಿರಲು ಸಾಧ್ಯವಿಲ್ಲ. ಹೀಗಾಗಿ ಅವರು ತಿಳಿಸಿದ ಸಾಕ್ಷಿಗಳನ್ನು ಸಾಕ್ಷ್ಯವನ್ನಾಗಿ ಪರಿಸಗಣಿಸಲು ಸಾಧ್ಯವಿಲ್ಲ ಎಂದು ತಿಳಿಸಿದ ನ್ಯಾಯಾಲಯ, 2008ರಲ್ಲಿ ಸ್ವರಣ್ ಸಿಂಗ್ ಪ್ರಕರಣದಲ್ಲಿ ನೀಡಲಾದ ತೀರ್ಪನ್ನು ಉದಾಹರಿಸಿದೆ. ನಾಲ್ಕು ಗೋಡೆಗಳ ಮಧ್ಯೆ ನಡೆದ ಸಂಭಾಷಣೆಯನ್ನು ಎಫ್ಐಆರ್ ನಲ್ಲಿ ಉಲ್ಲೇಖಿಸಿದ ಸಾಕ್ಷಿಗಳು ಕೇಳಲು ಸಾಧ್ಯವೇ ಇಲ್ಲ ಎನ್ನುತ್ತಾ ಅಟ್ರಾಸಿಟಿ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣವನ್ನು ರದ್ದು ಮಾಡಿದೆ.

ಪ್ರಕರಣದ ಹಿನ್ನೆಲೆ…

ಉತ್ತರಾಖಂಡ್ ನಲ್ಲಿ ದಾಖಲಾದ ಎಫ್ಐಆರ್ ಪ್ರಕಾರ,2019ರ ಡಿಸೆಂಬರ್ 10ರಂದು ವರ್ಮಾ ಎಂಬ ವ್ಯಕ್ತಿ ತಮ್ಮನ್ನು ಅವಮಾನಿಸಿದ್ದಾರೆ ಎಂದು ದೂರಿದ್ದರು. ಇದರ ಆಧಾರದ ಮೇಲೆ ಅಟ್ರಾಸಿಟಿ ಕಾಯ್ದೆಯಡಿ ಎಫ್ಐಅರ್ ದಾಖಲಾಗಿತ್ತು. ಇದನ್ನು ರದ್ದು ಮಾಡುವಂತೆ ವರ್ಮಾ ಹೈಕೋರ್ಟ್ ಮೊರೆ ಹೋಗಿದ್ದರು. ಅದರೆ, ಪ್ರಕರಣ ರದ್ದತಿಗೆ ಹೈಕೋರ್ಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ವರ್ಮಾ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಈ ವೇಳೆ ವರ್ಮಾ ಮತ್ತು ದೂರುದಾರ ಮಹಿಳೆಯ ಮಧ್ಯೆ ಅಸ್ತಿ ವಿವಾದ ಇರುವ ವಿಚಾರವನ್ನು ವರ್ಮಾ ಪರ ವಕೀಲ ಕೋರ್ಟ್ ಗೆ ಮಾಹಿತಿ ನೀಡಿದ್ದರು.

ಅಸ್ತಿ ವಿವಾದ ಹಿನ್ನೆಲೆಯಲ್ಲಿ ತಮ್ಮ ಕಕ್ಷಿದಾರರ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸಿರುವ ಮಹಿಳೆ ಎಸ್ಸಿ ಎಸ್ಟಿ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ವಾದ ಮಂಡಿಸಿದ್ದರು. ಅಸಲಿಗೆ ಇದು ಅಸ್ತಿ ವಿವಾದವಾಗಿರುವ ಕಾರಣ, ಇದಕ್ಕೆ ಸಂಬಂಧಿಸಿ ಮಾಡಲಾಗುವ ಅರೋಪಗಳನ್ನು ಎಸ್ಸಿ ಎಸ್ಟಿ ಕಿರುಕುಳ ನಿಗ್ರಹ ಕಾಯ್ದೆಯಡಿ ತೆಗೆದುಕೊಂಡು ಬರಬಾರದು ಎಂದು ಸುಪ್ರೀಂಕೋರ್ಟ್ ತಿಳಸಿದೆ. ಅವರು ಎಸ್ಸಿ ಎಸ್ಟಿಗೆ ಸೇರಿದವರು ಎಂಬ ಕಾರಣಕ್ಕಾಗಿಯೇ ಅವರನ್ನು ನಿಂದಿಸಿ ಕಿರುಕುಳ ನೀಡಿದರೇ ಅದನ್ನು ಅಟ್ರಾಸಿಟಿ ಕಾಯ್ದೆಯಡಿ ಪರಿಗಣಿಸಬಹುದು ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿತು.

LEAVE A REPLY

Please enter your comment!
Please enter your name here