ಅಜಿತ್‌ ದೋವಲ್‌-ತಬ್ಲಿಘಿ ಮುಖ್ಯಸ್ಥರ ಜೊತೆಗೆ ಮಧ್ಯರಾತ್ರಿ ಸಭೆ..! – ತಬ್ಲಿಘಿ ಮುಖ್ಯಸ್ಥ ನಾಪತ್ತೆ..? – ಅಮಿತ್‌ ಶಾಗೆ ಪ್ರಶ್ನೆಭರಿತ ಪತ್ರ

ದೇಶದಲ್ಲಿ ಕೊರೋನಾ ಪ್ರಕರಣ ಹೆಚ್ಚಾಗಲು ಕಾರಣ ಎನ್ನಲಾಗಿರುವ ದೆಹಲಿಯಲ್ಲಿ ನಡೆದಿದ್ದ ತಬ್ಲಿಘಿಗಳ ಜಮಾತ್‌ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್‌ ಶಾಗೆ ಮಹಾರಾಷ್ಟ್ರ ಗೃಹ ಸಚಿವ ಅನಿಲ್‌ ದೇಶ್‌ಮುಖ್‌ ಗಂಭೀರವಾದ ಪ್ರಶ್ನೆಗಳನ್ನು ಕೇಳಿ ಪತ್ರವನ್ನು ಬರೆದಿದ್ದಾರೆ. ಈ ಪ್ರಶ್ನೆಗಳಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರೂ ಆಗಿರುವ ಅಜಿತ್‌ ದೋವಲ್‌ ಮತ್ತು ತಬ್ಲಿಘಿಗಳ ಮುಖ್ಯಸ್ಥ ಮೌಲಾನ ನಡುವೆ ನಡೆದಿದ್ದ ಭೇಟಿ ಹಾಗೂ ಭೇಟಿಯ ಬಳಿಕ ಮೌಲಾನ ನಾಪತ್ತೆ ಆಗಿರುವ ಅಂಶವೂ ಒಳಗೊಂಡಿದೆ.

ಮಾರ್ಚ್‌ ೧೫ ಮತ್ತು ೧೬ರಂದು ಮುಂಬೈ ಉಪ ನಗರದಲ್ಲಿ ತಬ್ಲಿಘಿಗಳ ಕಾರ್ಯಕ್ರಮಕ್ಕೆ ಮಹಾರಾಷ್ಟ್ರ ಸರ್ಕಾರ ಅನುಮತಿಯನ್ನು ನಿರಾಕರಿಸಿತ್ತು ಎಂಬ ಅಂಶವನ್ನು ಉಲ್ಲೇಖಿಸಿ ಗೃಹ ಸಚಿವ ಅನಿಲ್‌ ದೇಶ್‌ಮುಖ್‌ ಪತ್ರ ಬರೆದಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್‌ ಶಾಗೆ ಕೇಳಲಾದ ಪ್ರಶ್ನೆಗಳು ಹೀಗಿವೆ:

೧. ದೆಹಲಿಯ ನಿಜಾಮುದ್ದೀನ್‌ನಲ್ಲಿ ತಬ್ಲಿಘಿ ಜಮಾತ್‌ ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಸಚಿವಾಲಯ ಅನುಮತಿ ಕೊಟ್ಟಿದ್ದು ಹೇಗೆ..?

೨. ದೆಹಲಿಯ ನಿಜಾಮುದ್ದೀನ್‌ನಲ್ಲಿ ಮರ್ಕಜ್‌ ಆಯೋಜಿಸಲಾಗಿತ್ತು ಅದರ ಪಕ್ಕದಲ್ಲೇ ನಿಜಾಮುದ್ದೀನ್‌ ಪೊಲೀಸ್‌ ಸ್ಟೇಷನ್‌ ಇದೆ. ಪೊಲೀಸ್‌ ಸ್ಟೇಷನ್‌ ಹತ್ತಿರದಲ್ಲೇ ಇದ್ದರೂ ಮರ್ಕಜ್‌ನ್ನು ಯಾಕೆ ತಡೆಯಲಿಲ್ಲ..? ಇದಕ್ಕೆ ಕೇಂದ್ರ ಗೃಹ ಸಚಿವಾಲಯ ಜವಾಬ್ದಾರಿ ಅಲ್ವಾ..?

೩. ಮರ್ಕಜ್‌ನಲ್ಲಿ ಇಷ್ಟೆಲ್ಲ ಜನರು ಸೇರಿದ್ದರು. ಇದರಿಂದ ಇಡೀ ರಾಜ್ಯದಲ್ಲಿ ಕೊರೋನಾ ಸೋಂಕು ಹಬ್ಬಿತು. ಇದಕ್ಕೆ ಕೇಂದ್ರ ಗೃಹ ಸಚಿವಾಲಯ ಹೊಣೆ ಅಲ್ವಾ..?

೪. ಮಧ್ಯರಾತ್ರಿ ೨ ಗಂಟೆಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ರನ್ನು ಮರ್ಕಜ್‌ಗೆ ಕಳುಹಿಸಿದ್ದು ಯಾರು ಮತ್ತು ಯಾಕೆ..? ಅಲ್ಲಿ ಕೆಲಸ ರಾಷ್ಟ್ರೀಯ ಭದ್ರತಾ ಸಲಹೆಗಾರರದ್ದೋ ಅಥವಾ ದೆಹಲಿ ಪೊಲೀಸ್‌ ಆಯುಕ್ತರದ್ದೋ..?

೫. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ಗೂ ತಬ್ಲಿಘಿಗಳ ಮುಖ್ಯಸ್ಥ ಮೌಲಾನಾಗೂ ಮಧ್ಯರಾತ್ರಿ ೨ ಗಂಟೆಗೆ ರಹಸ್ಯವಾಗಿ ಮಾತಾಡುವಂಥದ್ದು ಏನಿತ್ತು..?

೬. ಈ ಬಗ್ಗೆ ರಾಷ್ಟ್ರೀಯ ಭದ್ರತೆ ಸಲಹೆಗಾರರು ಮತ್ತು ದೆಹಲಿ ಪೊಲೀಸ್‌ ಆಯುಕ್ತರು ಇದುವರೆಗೆ ಯಾಕೆ ಹೇಳಿಕೆಯನ್ನು ಕೊಟ್ಟಿಲ್ಲ..?

೭. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಜೊತೆಗೆ ಮಾತಾಡಿದ ಮಾರನೇ ದಿನ ತಬ್ಲಿಘಿಗಳ ಮುಖ್ಯಸ್ಥ ಮೌಲಾನಾ ಎಲ್ಲಿ ಪರಾರಿಯಾದರು..? ಈಗ ಮೌಲಾನಾ ಎಲ್ಲಿದ್ದಾರೆ..?

೮. ತಬ್ಲಿಘಿಗಳ ಜೊತೆಗೆ ಯಾರಿಗೆ ಏನು ಸಂಬಂಧ..?

  • ಮರ್ಕಜ್‌ ಕಾರ್ಯಕ್ರಮಕ್ಕೆ ಅನುಮತಿ ಕೊಟ್ಟಿದ್ದು ನೀವು
  • ಮರ್ಕಜ್‌ ಕಾರ್ಯಕ್ರಮವನ್ನು ತಡೆಯದೇ ಸುಮ್ಮಿನಿದ್ದವರು ನೀವು
  • ತಬ್ಲಿಘಿಗಳ ಜೊತೆಗಿನ ಸಂಬಂಧ ನಿಮ್ಮದು

ಎಂದು ಮಹಾರಾಷ್ಟ್ರ ಗೃಹ ಸಚಿವ ದೇಶ್‌ಮುಖ್‌ ತಾವು ಬರೆದಿರುವ ಪತ್ರದಲ್ಲಿ ಪ್ರಶ್ನೆಗಳನ್ನು ಕೇಳಿದ್ದಾರೆ.

LEAVE A REPLY

Please enter your comment!
Please enter your name here