“ಅಂಗಳ”ದಲ್ಲಿ ಹದಿಹರೆಯದವರೊಂದಿಗೆ ಮುಟ್ಟಿನ ಪಿಸುಮಾತು.

ದೇಶ್ಯಾದ್ಯಾಂತ ಕೋವಿಡ್ 19 ರ ಹಾವಳಿ ದಿನ ದಿನೇ ಹೆಚ್ಚಾಗುತ್ತಲೆ ಇದೆ. ಅದರಿಂದ ಜನರ ಜೀವನ ಅಸ್ತವ್ಯಸ್ತವಾಗುವುದು ಕೂಡ ಹೆಚ್ಚಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ.

ಈ ಲಾಕ್ ಡೌನ್ ಗೆ ಜನ ಸಾಮಾನ್ಯರು ಅವರಿಗಾದಷ್ಟು ಸ್ಪಂದಿಸುತ್ತಿದ್ದಾರೆ. ಇವೆಲ್ಲಾ ಸರಿ ಆದರೆ, ಈ ಸಮಯದಲ್ಲಿ ಹದಿಹರೆಯ ಹೆಣ್ಣು ಮಕ್ಕಳ ಹಾಗೂ ಮಕ್ಕಳ ಆರೋಗ್ಯದ ಬಗ್ಗೆ ಅದೇ ಜವಾಬ್ದಾರಿಯಿಂದ ಸರ್ಕಾರ ಯಾಕೆ ತೆಗೆದುಕೊಂಡಿಲ್ಲ ಎನ್ನುವುದೇ ಸೋಜಿಗದ ವಿಷಯ.

ಮನೆ ಮನೆಗೆ ಅಕ್ಕಿ ಗೋಧಿ, ಹಾಲು ಇತ್ಯಾದಿ ಕೊಡಿ ಎಂದು ಹೇಳಿತೇ ಹೊರೆತು, ಮನೆ‌ಮನೆಯಲ್ಲಿ ಹದಿಹರೆಯದ ಮಕ್ಕಳು ಇದ್ದಲ್ಲಿ ಅವರಿಗೊಂದು ಪ್ಯಾಡ್ ವ್ಯವಸ್ಥೆ ಮಾಡಿ ಎಂದು ಜವಾಬ್ದಾರಿಯಿಂದ ಹೇಳುವಂತಹ ಸೌಜನ್ಯವೂ ತೋರಲಿಲ್ಲ. ಇನ್ನು ಮನೆಯವರಂತೂ ಇಂತಹ ವಿಷಯದ ಗೋಜಿಗೆ ಹೋಗಿರಲಿಕ್ಕಿಲ್ಲ ಬಿಡಿ.

ಅದ್ದರಿಂದ ಮಹಿಳೆಯರು ಮತ್ತು ಹೆಣ್ಮಕ್ಕಳು, ಈ ಸಮಯದಲ್ಲಿ ಮುಟ್ಟಾದಾಗ ಯಾವ ರೀತಿಯಲ್ಲಿ, ನಿಭಾಯಿಸಿದರು,ಹಾಗೇ ಯಾವ ರೀತಿಯ ಕಷ್ಟವನ್ನು ಅನುಭವಿಸಿದರು ಎನ್ನುವ ಸಂಗತಿಯನ್ನು  ಅಭಿಯಾನದ ಮೂಲಕ ತರಲು ಪ್ರಯತ್ನಿಸುತ್ತಿದೆ, ಕೊಪ್ಪಳ ಜಿಲ್ಲೆಯಲ್ಲಿರುವ “ಅಂಗಳ” ಎಂಬ ಸಂಸ್ಥೆ .

ಈ ಸಂಸ್ಥೆಯು ಮಕ್ಕಳು, ಮಹಿಳೆಯರು, ಹಾಗೂ ಯುವಜನರೊಂದಿಗೆ ಕೆಲಸ ಮಾಡುತ್ತಿದ್ದು, ಪ್ರತೀ ಬಾರಿಯೂ ಒಂದೊಂದು ವಿಷಯಕ್ಕೆ ಸಂಬಂಧಿಸಿದಂತೆ, ಹಾಗೆಯೇ ಮುಟ್ಟಿನ ಕುರಿತು ಹಲವು ಅಭಿಯಾನಗಳನ್ನು ಮಾಡುತ್ತಾ ಬಂದಿದೆ.

ಇದೀಗ ಈ ಕೊರೋನಾ ಲಾಕ್‌ ಡೌನ್‌ ಸಮಯದಲ್ಲಿ ಶಾಲೆ, ಹಾಸ್ಟೆಲ್ ಗಳಿಂದ  ಮನೆಗೆ ಬಂದ ಮಕ್ಕಳ ಸ್ಥಿತಿಗತಿ ಹಾಗೂ ಅವರ ಆರೋಗ್ಯದ ಸ್ಥಿತಿಗತಿಯ ಬಗ್ಗೆ ವಿಚಾರಿಸಿಕೊಳ್ಳಲು “ಮುಟ್ಟಿನ ಗುಟ್ಟು” ಎಂಬ ಜಾಗೃತಿ ಅಭಿಯಾನವನ್ನು ಮಾಡುತ್ತಿದ್ದು, ಈ ಅಭಿಯಾನದಲ್ಲಿ ಕರ್ನಾಟಕದ ಬೇರೆ ಬೇರೆ ಜಿಲ್ಲೆಯ ಮಕ್ಕಳೊಂದಿಗೆ ದೂರವಾಣಿ ಮುಖಾಂತರ ಹಾಗೂ ಇನ್ನೂ ಕೆಲವರ ಹತ್ತಿರ ನೇರವಾಗಿ ಸಂಪರ್ಕ ಮಾಡಿ ಈ ವಿಷಯವನ್ನು ಹಂಚುವ ಕೆಲಸವನ್ನು ಮಾಡುತ್ತಿದೆ.

ಮುಂದೊಂದು ದಿನ ನಮ್ಮ ದೇಶದ ಮಕ್ಕಳು ಹಾಗೂ ಮಹಿಳೆಯರ ಅನಾರೋಗ್ಯಕ್ಕೆ ತುತ್ತಾಗಿ ಪರದಾಡುವಂತಹ ಸ್ಥಿತಿ ಬರಬಾರದೆಂದೇ ಈ ಅಭಿಯಾನದ ಮುಖ್ಯ ಉದ್ದೇಶವಾಗಿದ್ದು ಮುಟ್ಟಿನ ಸಮಯದಲ್ಲಿ ಇರಬೇಕಾದ ಸೌಲಭ್ಯ, ಹಾಗೂ ಶುಚಿತ್ವದ ಅರಿವು ಮೂಡಿಸುವುದರ ಜೊತೆಗೆ ಅವರಿಗಿರುವ ಸವಾಲುಗಳು ಹಾಗೂ ಸಮಸ್ಯೆಗಳನ್ನು ಚರ್ಚೆಯ ಮುಖಾಂತರ ಹೊರಗೆಳೆಯುವಂತಹ ಪ್ರಯತ್ನವಾಗಿದೆ. ಈ ಚರ್ಚೆಯಲ್ಲಿ ಆರೋಗ್ಯದ ಅವ್ಯವಸ್ಥೆಯನ್ನು ಪ್ರಶ್ನಿಸಿ, ಮಕ್ಕಳು ಮಾಸ್ಕ್ ಧರಿಸಿ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಲಿದ್ದಾರೆ.

ಅಂಗಳ ಟ್ರಸ್ಟ್” ಈ ಜಾಗೃತಿ ಅಭಿಯಾನವನ್ನು “ಸಮತೆಯೆಡೆಗೆ ನಮ್ಮ ನಡಿಗೆ” ಎಂಬ ಆಶಯದೊಂದಿಗೆ ಮಾಡುತ್ತಿದ್ದು, ಪ್ರತೀ ತಿಂಗಳ ಮುಟ್ಟಿನ ಸ್ರಾವದ ದಿನಗಳಂತೆ 3 ರಿಂದ 7 ದಿನಗಳವರೆಗೂ ಈ‌ ಅಭಿಯಾನ ಮುಂದುವರೆಯಲಿದೆ. ಈ ಅಭಿಯಾನದಲ್ಲಿ ಪ್ರಾಥಮಿಕ ಹಾಗೂ ಹೈಸ್ಕೂಲ್ ಮಕ್ಕಳೊಂದಿಗೆ ಹಾಗೂ ಶಾಲೆಗೆ ಹೋಗದೆ ಇರುವ ಮಕ್ಕಳೊಂದಿಗೂ ಮುಟ್ಟಿನ ಮಾತುಕತೆ ಇರುತ್ತದೆ. 

– ಜ್ಯೋತಿ ಹಿಟ್ನಾಳ್‌  (ಅಂಗಳ ಸಂಸ್ಥೆಯ ಸಂಸ್ಥಾಪಕಿ).

LEAVE A REPLY

Please enter your comment!
Please enter your name here